ಸಾಮೂಹಿಕ ಸತ್ಯನಾರಾಯಣ ಪೂಜೆ | ಒಕ್ಕೂಟ ಪದಗ್ರಹಣ | ಹೆಬಳೆ ವಲಯ | SKDRDP
Вставка
- Опубліковано 6 січ 2025
- || ಓಂ ಶ್ರೀ ಮಂಜುನಾಥಾಯ ನಮಃ ||
ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದುರ್ಬಲವರ್ಗದವರನ್ನು ಗುರುತಿಸಿ ಅಂಥವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತುತ್ತಾ ಬಂದಿದೆ ಎಂದು ಭಟ್ಕಳ ತಾಲೂಕು ಯೋಜನಾಧಿಕಾರಿ ಶ್ರೀ ಗಣೇಶ ನಾಯ್ಕ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹೆಬಳೆ ವಲಯ, ಪ್ರಗತಿಬಂಧು, ಸ್ವ - ಸಹಾಯ ಸಂಘಗಳ ಒಕ್ಕೂಟ ಹೆಬಳೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಗಾಂಧಿನಗರದ ಶ್ರೀ ಗಣೇಶ ಸಮುದಾಯದ ಭವನದಲ್ಲಿ ಹಮ್ಮಿಕೊಂಡ ಹೆಬಳೆ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದುವರೆಗೂ ಸಮಾಜಮುಖಿ ಕಾರ್ಯಕ್ರಮಗಳನ್ನೇ ನಡೆಸಿಕೊಂಡು ಬರುತ್ತಿದ್ದು, ಬಡತನ ನಿರ್ಮೂಲನೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿ.ಡಿ.ಮೊಗೇರರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧರ್ಮಸ್ಥಳಕ್ಕೂ ನಮಗೂ ಅವಿನಾಭಾವ ಸಂಬಂಧ ಇದೆ. ಭಜನೆ ಇಲ್ಲದ ಮನೆ ವಿಭಜನೆಯಿಂದ ಕೂಡಿದ್ದು, ಇಂತಹ ಭಜನಾ ತರಬೇತಿಯನ್ನು ಯೋಜನೆಯಿಂದ ನೀಡುತ್ತಿರುವುದು ಶ್ಲಾಘನೀಯ. ಅಷ್ಟೇ ಅಲ್ಲ, ಶಿಕ್ಷಣ ಕ್ಷೇತ್ರಕ್ಕೆ ಯೋಜನೆಯ ಕೊಡುಗೆ ಅಪಾರವಾದುದಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸತ್ಯ ಸಾಯಿ ಸಮಿತಿಯ ಶ್ರೀ ಭಾಸ್ಕರ ನಾಯ್ಕ ಧಾರ್ಮಿಕ ಉಪನ್ಯಾಸ ನೀಡಿದರು. ದೇವರನ್ನು ನಂಬಿ ಆದರೆ ದೇವರ ಹೆಸರಿನಲ್ಲಿ ಮೋಸ ಮಾಡುವವರನ್ನು ನಂಬಬೇಡಿ. ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ ಅವರನ್ನು ಮೂಢನಂಬಿಕೆಯಿಂದ ದೂರ ಇರಿಸಿ ಉತ್ತಮ ಸಂಸ್ಕಾರ ನೀಡಿ ಎಂದು ಕರೆ ನೀಡಿದರು.
ಅತಿಥಿಯಾಗಿ ಆಗಮಿಸಿ ಮಾತನಾಡಿದ ವಿ.ವಿ.ಎಸ್.ಜಾಲಿ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಾಂತರಾಮ ನಾಯ್ಕರವರು, ಯೋಜನೆಯು ಹಳ್ಳಿಹಳ್ಳಿಗಳಲ್ಲಿ ಸಂಘಗಳನ್ನು ರಚನೆ ಮಾಡಿ, ಜನರಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ, ಅಬಲರನ್ನು ಸಬಲರನ್ನಾಗಿ ಮಾಡುವ ಪ್ರಯತ್ನಕ್ಕೆ ನಾವು ತಲೆಬಾಗುತ್ತೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಬಳೆ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಮುಕುಂದ ಮೊಗೇರರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಹೆಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮಾದೇವಿ ಮೋಗೇರ ಹಾಗೂ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಪುಂಡಲೀಕ ಹೆಬಳೆ ಉಪಸ್ಥಿತರಿದ್ದರು.
ಇದರ ಮಧ್ಯೆ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಿಕಟಪೂರ್ವ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ತಾಂಬೂಲ ನೀಡುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಕೆಲವು ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪತ್ರ ನೀಡಲಾಯಿತು.
ಈ ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡ ನಡೆಯಿತು. ಬಳಿಕ ಸ್ವಸಹಾಯ ಸಂಘದ ಮಹಿಳೆಯರ ನೃತ್ಯ, ಕುಣಿತ ಭಜನೆ ಭಕ್ತಿಗೀತೆ, ಕೋಲಾಟ, ಭರತನಾಟ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇದಕ್ಕೂ ಮೊದಲು ಮುಂಜಾನೆಯಿಂದಲೇ ಹೆಬಳೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ಜನಾರ್ಧನ ಭಟ್ ರವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ನೂರಕ್ಕೂ ಅಧಿಕ ದಂಪತಿಗಳು ಸಂಕಲ್ಪದಲ್ಲಿ ಪಾಲ್ಗೊಂಡರು.
ಸರ್ಪನಕಟ್ಟೆ ವಲಯದ ಮೇಲ್ವಿಚಾರಕರಾದ ಶ್ರೀ ಪ್ರಭಾಕರರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಜಾತಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಮ ಹೆಬಳೆ ಸ್ವಾಗತಿಸಿದರೆ, ಹೆಬಳೆ ವಲಯದ ಮೇಲ್ವಿಚಾರಕಿ ಶ್ರೀಮತಿ ಸುಶೀಲಾ ವಂದಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಜರಿದ್ದರು.
✍️ ರಾಮ ಹೆಬಳೆ, ಶೇಡಬರಿ, ಭಟ್ಕಳ
#ಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ಧಿಯೋಜನೆ
#ಹೆಬಳೆವಲಯ
#RamaHeble