ಭಾಗವತದ ಮಹಿಮೆ ಏನು?

Поділитися
Вставка
  • Опубліковано 27 вер 2024
  • ಶ್ರೀಮದ್‌ಭಾಗವತಮಹಿಮೆ
    ಪೂರ್ವಕಾಲದಲ್ಲಿ ತುಂಗಭದ್ರಾತೀರದ ಪಟ್ಟಣದಲ್ಲಿ ''ಆತ್ಮದೇವ''ನೆಂಬ ಬ್ರಾಹ್ಮಣ.ಅವನ ಹೆಂಡತಿಯ ಹೆಸರು ಧುಂಧುಲೀ. ಅವಳು ಚೆಲುವೆಯಾಗಿದ್ದಳು. ಆದರೆ ಕಲಹಪ್ರಿಯಳಾಗಿದ್ದಳು. ಸಂತತಿ ಇರಲಿಲ್ಲ. ಅನೇಕ ದಾನಧರ್ಮಗಳನ್ನು ಮಾಡಿದರೂ ಮಕ್ಕಳಾಗಲಿಲ್ಲ.ಆತ್ಮದೇವ ಕಾಡಿಗೆ ನಡೆದ. ಅಲ್ಲಿ ಒಬ್ಬ ಸಿದ್ದಪುರುಷನ ಭೆಟ್ಟಿಯಾಯಿತು. ಅವನ ಹತ್ತಿರ ತನ್ನ ದುಃಖವನ್ನು ತೋಡಿಕೊಂಡ. ಹೆಂಡತಿಯಂತೆ ಮನೆಯಲ್ಲಿ ಕಟ್ಟಿದ ಆಕಳು ಕೂಡ ಬಂಜೆಯಾಗಿದೆ. ನನ್ನ ಬದುಕೇ ವ್ಯರ್ಥ ಎಂದ. ಆ ಸಿದ್ಧಪುರುಷರು ಇವನ ಹಣೆಯಲ್ಲಿ ಬರೆದುದನ್ನು ವಿಚಾರಿಸಿ ನೋಡಿ "ನಿನಗೆ ಏಳು ಜನ್ಮಗಳವರೆಗೆ ಪುತ್ರಪ್ರಾಪ್ತಿ ಇಲ್ಲ'' ಎಂದರು. ಮತ್ತಷ್ಟು ದುಃಖದಿಂದ ಆತ್ಮದೇವ ಅವರನ್ನು ಬೇಡಿಕೊಂಡ. ಆಗ ಆ ಸಿದ್ದಪುರುಷರು ''ಆತ್ಮದೇವನೇ ಸಂತತಿಯ ಆಸೆ ಬಿಟ್ಟುಬಿಡು". ನಮ್ಮಿಂದ ನೀನು ಬಲಾತ್ಕಾರವಾಗಿ ಪುತ್ರನನ್ನು ಪಡೆದರೂ ನಿನಗೆ ಸುಖ ಲಭಿಸದು. ಆದರೂ ನೀನು ಪ್ರಾಣಾರ್ಪಣೆಗೆ ಸಿದ್ಧವಾದುದನ್ನು ನೋಡಿ ನಾನು ನಿನಗೆ ಪುತ್ರನನ್ನು ಕರುಣಿಸುತ್ತೇನೆ ಎಂದರು. ಆತ್ಮದೇವನಿಗೆ ಫಲವೊಂದನ್ನು ನೀಡಿ, "ನಿನ್ನ ಮಡದಿಗೆ ಇದನ್ನು ಕೊಡು ಮತ್ತು ಸದಾಚಾರಿಯಾದ ಮಗನು ಹುಟ್ಟಬೇಕೆಂಬ ಆಸೆ ಇದ್ದರೆ ನೀವು ಇಬ್ಬರೂ ನಿಯಮಬದ್ದರಾಗಿ ಇರಬೇಕು. ಸುಳ್ಳು ಮಾತನಾಡಬಾರದು. ಒಂದು ಹೊತ್ತು ಮಾತ್ರ ಊಟ ಮಾಡಬೇಕು. ನಿನ್ನ ಹೆಂಡತಿ ಪರಿಶುದ್ದಳಾಗಿ ಒಂದು ವರ್ಷ ಬ್ರಾಹ್ಮಣರ ಸೇವೆ ಮಾಡಬೇಕು'' ಎಂದು ಹೇಳಿ ಹೊರಟು ಹೋದರು.ಮನೆಗೆ ಬಂದ ಆತ್ಮದೇವ ಎಲ್ಲ ನಿಯಮಗಳನ್ನು ತಿಳಿಸಿ ಹೇಳಿ ಹೆಂಡತಿಗೆ ಆ ಹಣ್ಣನ್ನು ಕೊಟ್ಟ. ಆದರೆ ಹೆಂಡತಿಯಾದ ಧುಂಧುಲಿ ಮಾತ್ರ ಗರ್ಭ ಧರಿಸಿದರೆ ಆಗುವ ಕಷ್ಟಗಳನ್ನು ನೆನೆದು, ಆ ನಿಯಮಗಳನ್ನು ಪಾಲಿಸಲು ಇಷ್ಟವಿಲ್ಲದೇ ಆ ಫಲವನ್ನು ತಾನು ಭಕ್ಷಿಸಲಿಲ್ಲ. ಪತಿಗೆ ತಾನು ತಿಂದೆನೆಂದು ಸುಳ್ಳು ಹೇಳಿಬಿಟ್ಟಳು. ಕೆಲದಿನಗಳ ನಂತರ ತಂಗಿಯ ಮನೆಗೆ ಹೋದಾಗ ತಂಗಿಯು ತಾನು ಗರ್ಭಿಣಿಯಾಗಿರುವುದಾಗಿಯೂ, ಪ್ರಸವವಾದ ಕೂಡಲೇ ಮಗುವನ್ನು ಕೊಡುವುದಾಗಿಯೂ ಹೇಳಿ, ಧುಂಧುಲಿಗೆ ಹಣ್ಣನ್ನು ಹಸುವಿಗೆ ತಿನ್ನಿಸಬೇಕೆಂದು ಹೇಳಲು, ತಂಗಿಯ ಮಾತಿನಂತೆ ಹಣ್ಣನ್ನು ಧುಂಧುಲಿಯು ತನ್ನ ಮನೆಯ ಹಸುವಿಗೆ ತಿನ್ನಿಸಿಬಿಟ್ಟಳು.ತಾನು ಬಸುರಿಯಾಗಿದ್ದೇನೆಂದು ಸುಳ್ಳು ಹೇಳುತ್ತ ಬಯಕೆಯ ಹೆಂಗಸರು ತಿನ್ನುವಂತೆ ಇಷ್ಟವಾದ ಮೃಷ್ಟಾನ್ನವನ್ನು ತಿನ್ನುತ್ತಿದ್ದಳು. ಹಾಗೂ ತಿಂಗಳು ಕಳೆದು ಹೋದಂತೆ ಗರ್ಭಿಣಿ ಸ್ತ್ರೀಯರ ಚಿಹ್ನೆಯನ್ನು ತೋರಿಸ ಹತ್ತಿದಳು. ಅಷ್ಟರಲ್ಲಿ ಆ ತಂಗಿಯು ಗಂಡು ಮಗುವನ್ನು ಹೆತ್ತಳು. ಹುಟ್ಟಿದ ಕೂಡಲೇ ಕೂಸನ್ನು ರಹಸ್ಯವಾಗಿ ಧುಂಧುಲಿಗೆ ಕೊಟ್ಟುಬಿಟ್ಟಳು. ಧುಂಧುಲಿಯು ಅಲ್ಪಸ್ವಲ್ಪ ಪ್ರಸವ ವೇದನೆ ನಟಿಸಿ ಸೂಲಗಿತ್ತಿಯನ್ನು ಕರೆಕಳುಹಿಸಿ ಅವಳು ಬರುವಷ್ಟರಲ್ಲಿ ಗಂಡುಮಗು ಹೆತ್ತಿದ್ದೇನೆ ಎಂದು ಪ್ರಚಾರ ಮಾಡಿ ಆತ್ಮದೇವನಿಗೂ ಆ ಸುದ್ದಿ ತಿಳಿಸಿದಳು. ಆತ್ಮದೇವನಿಗೆ ಪುತ್ರ ಜನನದ ವಾರ್ತೆ ಕೇಳಿ ಪರಮಸಂತೋಷವಾಯಿತು. ಬ್ರಾಹ್ಮಣರಿಗೆ ದಾನ-ದಕ್ಷಿಣೆ ನೀಡಿದ. ಜಾತಕರ್ಮ ಸಂಸ್ಕಾರವನ್ನು ಮಾಡಿಸಿ, ಧುಂಧುಕಾರಿ ಎಂಬ ಹೆಸರನ್ನಿಟ್ಟನು.
    ನಂತರ ಧುಂಧುಲಿಯು ತನ್ನ ಪತಿಗೆ "ನನ್ನ ಸ್ತನಗಳಲ್ಲಿ ಹಾಲು ಬೀಳಲಿಲ್ಲ. ನನ್ನ ತಂಗಿಯು ಹೆತ್ತು, ಅವಳ ಕೂಸು ಮೃತವಾಗಿದೆ. ಅವಳನ್ನು ಇಲ್ಲಿಗೆ ಕರೆಸಿದರೆ ನಮ್ಮ ಕೂಸು ಹಾಲು ಕುಡಿದು ರಕ್ಷಿತವಾಗುತ್ತದೆ'' ಎಂದು ಹೇಳಿದಾಗ ಆತ್ಮದೇವ ಹಾಗೆಯೇ ಮಾಡಿದ.
    ಮೂರು ತಿಂಗಳು ಕಳೆದಾಗ ಆತ್ಮದೇವನ ಮನೆಯ ಹಸು ಒಂದು ಗಂಡು ಮಗುವನ್ನು ಹೆತ್ತಿತು. ಹಸುವು ಕೂಡ ಮಾನುಷ ಶಿಶುವನ್ನು ಹೆತ್ತಿರುವದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಆ ಕೂಸಿನ ಕಿವಿ ಆಕಳಿನಂತೆ ಇದ್ದದ್ದರಿಂದ ಅದಕ್ಕೆ "ಗೋಕರ್ಣ" ಎಂದಾಗಿ ಹೆಸರಿಟ್ಟನು.
    ಕಾಲವು ಗತಿಸಿದಂತೆ ಆತ್ಮದೇವನ ಮನೆಯಲ್ಲಿ ಗೋಕರ್ಣ, ಧುಂಧುಕಾರಿ ಇಬ್ಬರೂ ಬೆಳೆದು ದೊಡ್ಡವರಾದರು. ಗೋಕರ್ಣ ಸ್ವಾಧ್ಯಾಯ ಅಧ್ಯಯನ ಮಾಡಿ ಶಾಸ್ತ್ರಪಾಂಡಿತ್ಯ ಪಡೆದ. ಸದಾಚಾರ ಪ್ರವೃತ್ತಿಯಿಂದ ಭಗವದೈಕ ನಿಷ್ಠನಾದ. ಆದರೆ ಧುಂಧುಕಾರಿ - ದುರ್ನಡತೆಯಿಂದ ಆಚಾರಹೀನನಾಗಿ,
    ಸಂಧ್ಯಾದಿ ವರ್ಜಿತನಾಗಿ, ಕ್ರೂರನಾಗಿ ವರ್ತಿಸಿದ. ಕಳವು, ದೇವಬ್ರಾಹ್ಮಣ ದ್ವೇಷ, ದುಷ್ಟರ ಸಹವಾಸ, ಆಟವಾಡುವ ಮಕ್ಕಳನ್ನು ಬಾವಿಯಲ್ಲಿ ಎಸೆಯುವುದು, ವ್ಯಭಿಚಾರ ಅವನ ನಿತ್ಯ ಆಚಾರ. ವೇಶ್ಯಾಸಂಪರ್ಕದಿಂದ ಮನೆಯಲ್ಲಿದ್ದ ಹಣ ಬಂಗಾರ ಎಲ್ಲವನ್ನೂ ಪೋಲು ಮಾಡಿದ. ಇದರಿಂದ ಆತ್ಮದೇವ ದರಿದ್ರನಾದ. ನಿತ್ಯ ವೆಚ್ಚಕ್ಕೂ ಹಣವಿಲ್ಲದೇ ಪರಿತಪಿಸಿದ. " ಆತ್ಮದೇವನಿಗೆ ನಿಜವಾದ ವೈರಾಗ್ಯ ಉದಯಿಸಿ ಸಂಸಾರವನ್ನು ತೊರೆದು ವಿರಕ್ತನಾಗಿ ಶ್ರೀಹರಿಯಲ್ಲಿ ಅತ್ಯರ್ಥ ಭಕ್ತಿ ಮಾಡಿ ಮುಕ್ತನಾದ.ತಂದೆ ಅರಣ್ಯಕ್ಕೆ ಹೋದ ಮೇಲೆ ಧುಂಧುಕಾರಿ ಹಣಕ್ಕಾಗಿಧುಂಧುಲಿಯನ್ನು ಪೀಡಿಸಿದ. ಸತಾಯಿಸಿದ. ಮಗನಿಂದ ಬೆದರಿಕೆ, ಹೊಡೆತಗಳನ್ನು ತಿಂದ ಧುಂಧುಲಿ ಬೇಸತ್ತು ಮನೆಯ ಹಿಂದಿನ ಹಾಳುಬಾವಿಯಲ್ಲಿ ಬಿದ್ದು ಪ್ರಾಣನೀಗಿದಳು. ಜನರು ಬಂದು ಅವಳನ್ನು ಮೇಲೆ ಎಳೆದು ಹಾಕಿದರು. ಗೋಕರ್ಣಅವಳಿಗೆ ಅಂತ್ಯಸಂಸ್ಕಾರ ಮಾಡಿ ಮನೆಬಿಟ್ಟು ಹೋಗಿಬಿಟ್ಟ.
    ಧುಂಧುಕಾರಿ ತಂದೆ-ತಾಯಿಗಳಿಬ್ಬರೂ ಇಲ್ಲದಂತಾಗಲು ಬೆಲೆವೆಣ್ಣು ಗಳನ್ನು ಮನೆಯಲ್ಲಿಯೇ ತಂದು ಇಟ್ಟುಕೊಂಡ. ಧನಪಿಶಾಚಿಗಳಾದ ಅವರು ಇವನಿಂದ ನಿತ್ಯವೂ ಹಣ, ಬಂಗಾರ, ವಸ್ತು ಒಡವೆಗಳನ್ನು ಕಿತ್ತುಕೊಳ್ಳುತ್ತಿದ್ದರು. "
    ವೇಶ್ಯಾಸ್ತ್ರೀಯರು ಇವನನ್ನು ಕೊಂದು ಮನೆಯಲ್ಲಿ ತಂದಿರಿಸಿದ ದ್ರವ್ಯ ತೆಗೆದುಕೊಂಡು ಹೋಗಿಬಿಡೋಣ'' ಎಂಬುದಾಗಿ ವಿಚಾರ ಮಾಡಿ ಧುಂಧುಕಾರಿಯ ಕೊರಳಿಗೆ ಉರುಲು ಹಾಕಿದರು. ಹಗ್ಗದಿಂದ ಅವನ ಕೊರಳನ್ನು ಬಿಗಿದರೂ ಪ್ರಾಣಿ ಹೋಗದಿರಲು, ಅವನನ್ನು ನೆಲದ ಮೇಲೆ ಬೀಳಿಸಿ ಮೈ ಕೈ ಬಿಗಿದು ಬಾಯಲ್ಲಿ ಬೆಂಕಿ ಇಟ್ಟು ಮೈಗೆಲ್ಲ ಉರಿಹಚ್ಚಿದರು. ಅವನು ಒದ್ದಾಡಿ ಪ್ರಾಣಬಿಟ್ಟನು. ದೊಡ್ಡ ತಗ್ಗನ್ನು ತೆಗೆದು ಅಲ್ಲಿಯೇ ಹೂಳಿಬಿಟ್ಟರು.
    ಇತ್ತ ಧುಂಧುಕಾರಿ ಅಪಮೃತ್ಯುವಿಗೀಡಾಗಿ ಪ್ರೇತನಾಗಿ ಗಾಳಿಯ ರೂಪದಿಂದ ದಿಕ್ಕೆಟ್ಟು ಓಡಾಡಿದ. ಕೆಲವು ದಿನಗಳ ನಂತರ ಗೋಕರ್ಣನಿಗೆ ಅಣ್ಣನ ಮರಣದ ಸಮಾಚಾರ ತಿಳಿಯಿತು. ಗೋಕರ್ಣನು ಗಯಾಕ್ಷೇತ್ರಕ್ಕೆ ಹೋಗಿ ಧುಂಧುಕಾರಿಯ ಶ್ರಾದ್ಧ ಮಾಡಿದ. ಗೋಕರ್ಣನು ದಿವಾಕರನ ಆದೇಶದಂತೆ ಭಾಗವತ ಸಪ್ತಾಹ ಆರಂಭಿಸಿದ.ಪ್ರತಿದಿನ ಶ್ರೀಮದ್ ಭಾಗವತ ಕಥಾ * ಶ್ರವಣವು ಅಂತ್ಯವಾಗುವಾಗ ಒಂದೊಂದು ಗಂಟು ಒಡೆಯುತ್ತ ಬಂದು ಏಳನೆಯ ದಿವಸ ಕೊನೆಯ ಗಂಟು ಸ್ಫೋಟ ವಾಯಿತು.
    ಕೊನೆಯ ದಿನ ಶ್ರವಣಾ ನಂತರ ಧುಂಧುಕಾರಿಯ ಪ್ರೇತತ್ವವು ನಿವಾರಣೆಯಾಗಿ ಅವನಿಗೆ ಒಂದು ದಿವ್ಯವಾದ ರೂಪವು ಪ್ರಾಪ್ತವಾಯಿತು. ಕೊರಳಲ್ಲಿ ತುಳಸಿಮಾಲೆ, ಮೈಮೇಲೆ ಪೀತಾಂಬರ, ಅಂಗಾಂಗಗಳಲ್ಲಿ ಆಭರಣಗಳಿಂದ ಮಂಡಿತನಾಗಿ ರಾರಾಜಿಸಿದ. ಅಲ್ಲಿಯೇ ಪ್ರವಚನ ಮಾಡುತ್ತ ಕುಳಿತ ಗೋಕರ್ಣನಿಗೆ ನಮಸ್ಕಾರ ಮಾಡಿ "ಪ್ರಿಯ ಬಂಧುವೇ ! ಭಾಗವತ ಕಥೆಯು ನಿಜವಾಗಿಯೂ ಧನ್ಯ ಧನ್ಯ. ಸಪ್ತಾಹ ಪ್ರವಚನವು ಪ್ರೇತತ್ವ ಕಳೆದು ವಿಷ್ಣುಲೋಕಕ್ಕೆ ಕರೆದೊಯ್ಯುವ ಏಕಮಾತ್ರ ಸಾಧನವಾಗಿದೆ. ನೀನು ಭಾಗವತ ಪ್ರವಚನ ಮಾಡಿ ನನ್ನನ್ನು ಉದ್ದರಿಸಿದೆ'' ಎಂಬುದಾಗಿ ಗೋಕರ್ಣನನ್ನು ಅಭಿನಂದಿಸಿದ. ಅಷ್ಟರಲ್ಲಿ ವಿಷ್ಣುಲೋಕದಿಂದ ಬಂದ ವಿಮಾನದಲ್ಲಿ ಕುಳಿತು ವೈಕುಂಠಕ್ಕೆ ಪ್ರಯಾಣ ಬೆಳೆಸಿದ.
    ಇದನ್ನು ನೋಡಿ ಅಲ್ಲಿ ಕುಳಿತ ಜನ "ನಾವೆಲ್ಲರೂ ಶ್ರವಣ ಮಾಡಿದ್ದೇವೆ. ಇವನೊಬ್ಬ ಮಾತ್ರ ವೈಕುಂಠಕ್ಕೆ ತೆರಳಿದ್ದು ಹೇಗೆ ?'" ಎನ್ನಲು ಗೋಕರ್ಣ ಹೇಳಿದ, "ಶ್ರೀಮದ್‌ಭಾಗವತ ಸಪ್ತಾಹವನ್ನು ದೃಢವಾದ ಭಕ್ತಿಯಿಂದ ಉಪವಾಸವಿದ್ದು ಕೇಳಬೇಕು". ಮತ್ತೆ ಎಲ್ಲರೂ ಉಪವಾಸದಿಂದ, ಭಕ್ತಿಯಿಂದ ಕೂಡಿ ಗೋಕರ್ಣನ ಮುಖದಿಂದ ಶ್ರೀಮದ್‌ಭಾಗವತವನ್ನು ಸಮಗ್ರವಾಗಿ ಶ್ರವಣ ಮಾಡಿ ಎಲ್ಲರೂ ವೈಕುಂಠಕ್ಕೆ ಪ್ರಯಾಣ ಮಾಡಿದರು.

КОМЕНТАРІ •